ಅಪರಾಧ
	
ಸಮಾಜ ಮತ್ತು ನ್ಯಾಯಶಾಸ್ತ್ರಗಳಲ್ಲಿ ಬಳಕೆಯಲ್ಲಿರುವ ಪದ. ಸಮಾಜದ ಕ್ಷೇಮಕ್ಕೆ ಭಂಗತರುವ ಮತ್ತು ಸಾಮಾಜಿಕ ಆದರ್ಶಗಳಿಗೆ ಧಕ್ಕೆ ಉಂಟು ಮಾಡುವ ಕಾರ್ಯಚಟುವಟಿಕೆಗಳಿಗೆ ಈ ಹೆಸರಿದೆ. ನ್ಯಾಯಶಾಸ್ತ್ರದ ಪ್ರಕಾರ ಕಾನೂನಿನ ವಿರುದ್ಧವರ್ತನೆ ಅಪರಾಧ.
	
ವ್ಯಾಪ್ತಿ : ಸಮಾಜದ ಕ್ಷೇಮ, ಸಾಮಾಜಿಕ ಮೌಲ್ಯಗಳಿಗೆ ಸಂಬಂಧಿಸಿದ ವಿಷಯಗಳು ಕಾಲ ಕಾಲಕ್ಕೆ ವ್ಯತ್ಯಾಸಗೊಂಡಿವೆ. ಆದ್ದರಿಂದ ಸಮಾಜದ ದೃಷ್ಟಿಯಲ್ಲಿ ಯಾವುದು ಅಪರಾಧ ಯಾವುದು ಅಲ್ಲ ಎಂಬುದು ಆ ಸಮಾಜದ ಆ ಕಾಲದ ಮನೋಭಾವವನ್ನೂ ಸಾಮಾಜಿಕ ಬದಲಾವಣೆಯ ವೇಗವನ್ನೂ ಅವಲಂಬಿಸಿದೆ. ಒಂದು ಕಾಲದಲ್ಲಿ ಕ್ಷಮ್ಯವಾಗಿ ಕಂಡ ಕೃತ್ಯ ಮತ್ತೊಂದು ಕಾಲದಲ್ಲಿ ಮಹಾಪರಾಧವಾಗಬಹುದು. ಸಮಾಜಹಿತಕ್ಕೆ ಧಕ್ಕೆ ತರುವಂಥ ಚಟುವಟಿಕೆಗಳಲ್ಲಿ ತೊಡಗಿದ ವ್ಯಕ್ತಿಯನ್ನು ಸರ್ಕಾರ ದಂಡಿಸುವುದಾದರೂ ಅವೇ ಅಕೃತ್ಯಗಳು ಎಲ್ಲ ಕಾಲದಲ್ಲೂ ಶಿಕ್ಷಾರ್ಹವಾಗಿದ್ದುವು ಎಂದು ಹೇಳಬರುವುದಿಲ್ಲ. ವಿವಾಹ ಮತ್ತು ಕುಟುಂಬ ಜೀವನಕ್ಕೆ ಸಂಬಂಧಿಸಿದ ಕಟ್ಟು ಕಟ್ಟಳೆಗಳು, ಸಂಪ್ರದಾಯಗಳು, ಇತ್ತೀಚಿನ ವರ್ಷಗಳಲ್ಲಿ ಕುಟುಂಬ ನಿಯಂತ್ರಣಸಾಧನ, ದಾಂಪತ್ಯ ವಿಚ್ಛೇದನಗಳಿಂದ ಸಡಿಲಗೊಂಡಿವೆ. ಇಂದು ಎಲ್ಲ ಬಗೆಯ ಆಚಾರವ್ಯವಹಾರಗಳು ಚರ್ಚಾಸ್ಪದವಾಗಿರುವು. ಸಮಾಜ ಒಪ್ಪದ ಒಂದು ಅಭಿಪ್ರಾಯವನ್ನು ಸರ್ಕಾರ ಕಾಯಿದೆಯಿಂದ ವಿಧಿಸಿಲು ಜನರ ಪ್ರಬಲ ವಿರೋಧವಿರುತ್ತದೆ.
	
ಹೀಗೆ ಅಪರಾಧಕ್ಕೂ ಕಾಲಾನುಸಾರ ಬದಲಾವಣೆಗೊಳ್ಳುವ ಜನಾಭಿಪ್ರಾಯ ಹಾಗೂ ಸನ್ನಿವೇಶಗಳಿಗೂ ನಿಕಟ ಸಂಬಂಧವಿದೆ. ಆದ್ದರಿಂದ ಒಂದು ಖಚಿತವಾದ ಅಪರಾಧಮಾದರಿ ಎಂದಿರುವುದು ಸಾಧ್ಯವಿಲ್ಲ. ಯಾವ ಒಬ್ಬ ವ್ಯಕ್ತಿಯನ್ನೇ ಆಗಲಿ ಅಥವಾ ಯಾವ ಒಂದು ಕೃತ್ಯವನ್ನೇ ಆಗಲಿ ಎಲ್ಲ ಕಾಲಕ್ಕೆ ಅಪರಾಧಿ ಅಥವಾ ಅಪರಾಧವೆಂದು ಕಳಂಕ ಹಚ್ಚುವುದೂ ಸಾಧ್ಯವಿಲ್ಲ. ಮನಶ್ಯಾಸ್ತ್ರದ ದೃಷ್ಟಿಯಿಂದಲೂ ಈ ಮಾತು ಸತ್ಯ. ನಿತ್ಯದೋಷಾತ್ಮಕ ಪ್ರವೃತ್ತಿಗಳಾಗಲಿ ಮನೋಭಾವಗಳಾಗಲಿ ಶಕ್ತಿಸಾಮಥ್ರ್ಯಗಳಾಗಲಿ ಇರುವುದು ಅಸಾಧ್ಯ.
	
ವ್ಯಾವಹಾರಿಕ ದೃಷ್ಟಿಯಲ್ಲಿ ಅಪರಾಧ: ಕಾನೂನಿನ ಚೌಕಟಿನಲ್ಲಿ ವ್ಯಾವಹಾರಿಕ (ಅಂದರೆ ಮತ, ಧರ್ಮ, ನೀತಿ, ದೇವರು ಮುಂತಾದ ವಿಷಯಗಳಿಗೆ ಸಂಬಂಧಿಸಿದ) ಅಪರಾಧವಿದೆ. ಕಾನೂನಿನ ರಚನೆ ಆಯಾ ಕಾಲದ ಪ್ರಾಪಂಚಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಇರುವುದಾದರೂ ಧಾರ್ಮಿಕ ಹಾಗೂ ನೈತಿಕದೃಷ್ಟಿಯಿಂದ ಅಪರಾಧ ಮಾಡಿದರೆ ಪಾಪ ಬರುತ್ತದೆ ಎಂದು ಭಾವಿಸಿ ಅಪರಾಧಿಗೆ ತಕ್ಕ ಶಿಕ್ಷೆ ವಿಧಿಸುವುದು ಇನ್ನೂ ವಾಡಿಕೆಯಲ್ಲಿದೆ. ಇಂದೂ ಕೂಡ ನ್ಯಾಯಾಲಯಗಳು ಅಪರಾಧಿಗಳಿಗೆ ವಿಧಿಸುವ ಏಕಾಂತ ಕಾರಾಗೃಹವಾಸಕ್ಕೆ ಹಿಂದೆ ಧರ್ಮಬೋಧಕರು ಕೊಡುತ್ತಿದ್ದ ಅಂಥ ಶಿಕ್ಷೆಗಳ ಹಿನ್ನೆಲೆ ಇದ್ದೇ ಇದೆ. ಇದು ಹೇಗೇ ಇರಲಿ, ವ್ಯಾವಹಾರಿಕ ಅಪರಾಧಕ್ಕೆ ಧರ್ಮದ ಸೋಗನ್ನು ಕೊಡುವುದಕ್ಕೆ ಯಾವ ಸಮರ್ಥನೆಯೂ ಇಲ್ಲ. ದರ್ಶನ, ವಿಜ್ಞಾನ ಹಾಗೂ ಇತಿಹಾಸಗಳು ಇದರ ಬಗ್ಗೆ ವಿರೋಧಾಭಿಪ್ರಾಯಗಳನ್ನು ಸೂಚಿಸುತ್ತವೆ. ಆದ್ದರಿಂದ ಆಡಳಿತಗಾರರು ಅಪರಾಧವನ್ನು ನಿರ್ಧರಿಸುವಾಗ ಮತ ಧರ್ಮಗಳ ಹೆಸರು ಬಳಸಬಾರದು.
	
ಅಪರಾಧಿ ಮತ್ತು ಅಪರಾಧ: ಆಧುನಿಕ ಅಪರಾಧಶಾಸ್ತ್ರ ಅಪರಾಧಕೃತ್ಯಕ್ಕಿಂತ ಹೆಚ್ಚು ಮಹತ್ತ್ವವನ್ನು ಅಪರಾಧಿಯ ಉದ್ದೇಶಗಳಿಗೆ ನೀಡುವುದು. ಆಧುನಿಕ ದಂಡನಶಾಸ್ತ್ರದ ಪಿತೃವೆನಿಸಿದ ಬೆಕಾರಿಯೊ ಹೇಳುವಂತೆ ಚಿಕ್ಕವರಾಗಲಿ, ದೊಡ್ಡವರಾಗಲಿ, ಅವಿವೇಕದಿಂದಾಗಲಿ, ಆಕಸ್ಮಿಕವಾಗಿಯಾಗಲಿ, ಬಲವಂತದಿಂದಾಗಲಿ, ಮೌಢ್ಯದಿಂದಾಗಲಿ ಅಪರಾಧ ಮಾಡಿದರೆ ಅದಕ್ಕೆ ಶಿಕ್ಷೆ ವಿಧಿಸಬೇಕು. ಆದರೆ ಅಪರಾಧವೆಸಗುವ ವ್ಯಕ್ತಿ ಕೇವಲ ಸಾಮಾನ್ಯ ಮಾನವ. ಆತ ಇತರರಿಗೆ ನೋವನ್ನುಂಟು ಮಾಡಿದ್ದರೆ ಅದರ ಕಾರಣ ಅವನ ಮನಃಸ್ಥಿತಿ ಹಾಗೂ ಸನ್ನಿವೇಶಗಳು. ಆದ್ದರಿಂದ ಅವನಿಗೆ ಶಿಕ್ಷೆ ವಿಧಿಸಲೇ ಬೇಕಾದರೆ ಅವನ ಉದ್ದೇಶಗಳನ್ನು ಹತೋಟಿಯಲ್ಲಿಡುವುದಲ್ಲದೆ ಮನಸ್ಸಿನ ಸ್ಥಿತಿ ಸನ್ನಿವೇಶಗಳನ್ನು ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ಆ ದೃಷ್ಟಿಯಿಂದ ಅಪರಾಧಿಗೆ ಚಿಕಿತ್ಸೆ ಮಾಡಬೇಕೇ ವಿನಾ ಅಪರಾಧಕ್ಕಲ್ಲ. ಶಿಕ್ಷೆ ಮುಖ್ಯವಲ್ಲ. ಅಪರಾಧಿಯ ಸುಧಾರಣೆ ಮುಖ್ಯ. ಆದ್ದರಿಂದ ಶಿಕ್ಷೆಯ ರೀತೀನೀತಿಗಳು ಈ ಗುರಿಯತ್ತ ಬದಲಾಯಿಸಬೇಕು. ಬಾಲಾಪರಾಧಿಗಳ ವಿಷಯದಲ್ಲಂತೂ ಬಹುಎಚ್ಚರಿಕೆಯಿಂದ ವರ್ತಿಸಬೇಕಾಗುತ್ತದೆ. ಕುತೂಹಲ, ಅನುಕರಣ, ಅಗತ್ಯ, ಆಶೆ, ಪ್ರತೀಕಾರ, ಕುಚೇಷ್ಟೆ ಇವುಗಳಲ್ಲಿ ಒಂದೋ ಹಲವೋ ಹಿನ್ನೆಲೆಯಾಗಿರುವ ಬಾಲಾಪರಾಧಕ್ಕೆ ಸುಧಾರಣಾರೂಪವಾದ ಶಿಕ್ಷೆ ಹಾಗೂ ಶಿಕ್ಷಣ ಸರಿಯಾದ ಮದ್ದಾಗಬಹುದು.
	
ಅಪರಾಧದ ಸಹಜತೆ : ಅಪರಾಧದ ಬಗ್ಗೆ ಒಂದು ಹೊಸ ಕಲ್ಪನೆಯೂ ಇದೆ. ಅಪರಾಧಿ ಎಲ್ಲರಂತೆ ಒಬ್ಬ ಸಾಮಾನ್ಯ ಮಾನವ. ದೈನಂದಿನ ಬಾಳಹೋರಾಟದಲ್ಲಿ ಉದ್ದೇಶಪೂರ್ವಕವಾಗಿ ಅಥವಾ ರಹಿತವಾಗಿ ಆತ ತನ್ನ ಕಾಮನೆಗಳನ್ನು ಪೂರೈಸಿಕೊಳ್ಳಲು ಕೆಲವು ಕಾನೂನುಬಾಹಿರ ಕ್ರಮಗಳನ್ನು ಅನುಸರಿಸಬಹುದು. ಇಲ್ಲಿ, ಅವನು ಅಪರಾಧವೆಸಗುತ್ತಾನೆ. ಆದರೆ ಇಂಥ ಪ್ರವೃತ್ತಿ ಮನುಷ್ಯಸಹಜವಾದದ್ದು; ವ್ಯಕ್ತಿಗೆ ಅಂಥ ಕ್ರಮಾನುಸರಣೆ ಮಾಡಲು ಪ್ರೇರಣೆ ದೊರೆತದ್ದು ಸಮಾಜದ ಅಥವಾ ಅದು ರಚಿಸಿದ ಕಾನೂನಿನ ದೋಷ ಎಂಬ ವಾದವೂ ಇದೆ. ಸುಪ್ರಸಿದ್ಧ ಸಮಾಜಶಾಸ್ತ್ರಜ್ಞ ಡರ್ ಕ್ಹೀಮ್ ಹೇಳುವಂತೆ ಅಪರಾಧದಲ್ಲಿ ಒಂದು ಬಗೆಯ ಶ್ರೇಷ್ಠತೆ ಇದೆ; ಅದು ಸಮಾಜವನ್ನು ಎಚ್ಚರಿಸಿ ಚಟುವಟಿಕೆಯಿಂದ ಇರುವಂತೆ ಮಾಡುವುದಲ್ಲದೆ ಸುಧಾರಣೆಗಳ ಆವಶ್ಯಕತೆ ಮತ್ತು ಮಾರ್ಗದರ್ಶನಗಳಿಗೆ ಆದೇಶ ನೀಡುತ್ತದೆ.
	
ಅಪರಾಧಿಯ ಹೊಣೆಗಾರಿಕೆ: ಒಬ್ಬ ವ್ಯಕ್ತಿ ತನ್ನ ಅಪರಾಧಕೃತ್ಯಕ್ಕೆ ಜವಾಬ್ದಾರನಾಗಬೇಕಾದರೆ ಅದನ್ನು ಮಾಡಲು ಅಥವಾ ಬಿಡಲು ಅವನಿಗೆ ಸ್ವಾತಂತ್ರ್ಯವಿರಬೇಕೆಂಬುದು ಅಂಗೀಕೃತ ವಿಷಯ. ಸ್ವಾತಂತ್ರ್ಯವೆಂದರೆ ವ್ಯಕ್ತಿಗೆ ತನ್ನ ಉದ್ದೇಶ, ಮಾನಸಿಕಸ್ಥಿತಿ, ಸನ್ನಿವೇಶ, ಮುಂತಾದುವುಗಳ ಮೇಲಿನ ಪೂರ್ಣ ಹತೋಟಿ. ಆದ್ದರಿಂದ ಒಬ್ಬ ವ್ಯಕ್ತಿ ಮೌಢ್ಯದಿಂದ, ತಪ್ಪುತಿಳಿವಳಿಕೆಯಿಂದ, ಬಲಾತ್ಕಾರದಿಂದ, ಮೋಸಕ್ಕೆ ಬಲಿಯಾಗಿ ಅಥವಾ ಮನಸ್ಸಿನ ಇಲ್ಲವೆ ಸನ್ನಿವೇಶದ ನ್ಯೂನತೆಗಳಿಂದ ಒಂದು ಅಪರಾಧಕೃತ್ಯವನ್ನು ಎಸಗಿದರೆ ಆ ಕೃತ್ಯ ಪಕ್ಕಾ ಅಪರಾಧವಾಗಲಾರದು. ಅಂದರೆ ಆ ಕೃತ್ಯಕ್ಕೆ ಆತ ಸಂಪೂರ್ಣವಾಗಿ ಹೊಣೆಗಾರನಲ್ಲ.
	
ಇದೇ ತತ್ತ್ವದ ಆಧಾರದ ಮೇಲೆ ಅಪರಾಧಿಗೆ ವಿಧಿಸುವ ಶಿಕ್ಷೆಯ ವಿಧಾನದಲ್ಲಿ ಅನೇಕ ಮಾರ್ಪಾಡುಗಳಾಗಿವೆ. ಶಿಕ್ಷೆ ಎಂಬ ಪದವೂ ಬದಲಾವಣೆ ಹೊಂದಿ ಸಾಮಾಜಿಕ ರಕ್ಷಣೆ ಎಂಬ ಅರ್ಥ ಪಡೆದಿದೆ. ಇದನ್ನು ಅನುಸರಿಸಿ ಅಪರಾಧಿಗೆ ಭಯ ಹುಟ್ಟಿಸುವಂಥ ಶಿಕ್ಷೆಗೆ ಬದಲಾಗಿ ಅವನ ನಡತೆಯನ್ನು ಪರಿವರ್ತಿಸುವ ಸುಧಾರಣೆಗಳು ಹೆಚ್ಚು ಹೆಚ್ಚಾಗಿ ಬಳಕೆಗೆ ಬರುತ್ತಿವೆ. ಅಪರಾಧ ದ್ವೇಷವನ್ನು ಪ್ರಚೋದಿಸುತ್ತದೆ. ಆದರೆ ಶಿಕ್ಷೆ ನೋವನ್ನು ಪ್ರಚೋದಿಸುತ್ತದೆ. ದ್ವೇಷವನ್ನು ನೋವಿನಿಂದ ಶಮನಗೊಳಿಸುವುದು ಸಾಧ್ಯವಿಲ್ಲ; ಅದಕ್ಕೆ ಪ್ರೇಮದಿಂದ ಮನಃಪರಿವರ್ತನೆ ಮಾಡಬೇಕು. ಆದ್ದರಿಂದ ಅಪರಾಧಕ್ಕೆ ಶಿಕ್ಷೆ ಸಮರ್ಪಕ ಚಿಕಿತ್ಸೆ ಅಲ್ಲ.
	
ಅಪರಾಧದ ಕಾರಣಗಳು: ಅಪರಾಧದ ಸ್ವರೂಪವನ್ನು ತಿಳಿದ ಮೇಲೆ ಅದಕ್ಕೆ ಕಾರಣಗಳನ್ನು ಕಂಡುಹಿಡಿಯಬಹುದು. ವ್ಯಕ್ತಿ ಸ್ವಹಿತವನ್ನು ಸಾಧಿಸಿಕೊಳ್ಳುವುದಕ್ಕಾಗಿ ನಾನಾ ಉದ್ದೇಶಗಳಿಂದ ಅಪರಾಧ ಮಾಡುತ್ತಾನೆ. ಅಪರಾಧಕ್ಕೆ ಮಾನಸಿಕ, ದೈಹಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ ಕಾರಣಗಳಿವೆ. ಲೋಂಬ್ರೋಸೊ ಅಪರಾಧ ಅನುವಂಶೀಯ ಎಂದು ಸಮರ್ಥಿಸಿದ್ದಾನೆ. ಫ್ರಾಯ್ಡ್ ಅದನ್ನು ಅನುಮೋದಿಸಿದ್ದಾನೆ. ನ್ಯೂನತೆಗಳಿಂದ ಕೂಡಿದ ಸನ್ನಿವೇಶ ಅಪರಾಧಕ್ಕೆ ಕಾರಣವೆಂದು ಫ್ರಾನ್ಸ್ ದೇಶದ ಸಮಾಜಶಾಸ್ತ್ರಜ್ಞರ ವಾದ. ಅಪರಾಧ ಸ್ವಹಿತಸಾಧನೆಗಾಗಿ ಬಳಸಿಕೊಳ್ಳುವ ಸಾಧನ ಎಂದು ಸಮಾಜವಾದಿಗಳು ಅಭಿಪ್ರಾಯ ಪಡುತ್ತಾರೆ.
	
ಪ್ರಾಚೀನ ಸಮಾಜದಲ್ಲಿ ಜನ ತಮ್ಮ ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದರಲ್ಲಿಯೇ ಮಗ್ನರಾಗಿದ್ದುದರಿಂದ ಅಪರಾಧಗಳ ಸಂಖ್ಯೆ ತೀರ ಕಡಿಮೆಯಾಗಿತ್ತೆಂದು ಹೇಳಬಹುದು. ಗಳಿಸಿದ್ದನ್ನು ಕೂಡಿಡುವುದು ಮಹಾಪರಾಧವೆಂದು ಅವರು ಭಾವಿಸಿದ್ದರು. ಆದರೆ ಇಂದು ನಾಗರಿಕಸಮಾಜದಲ್ಲಿ ಆ ರೀತಿ ಮಾಡುವುದು ಪಾಪವೂ ಅಲ್ಲ, ಅಪರಾಧವೂ ಅಲ್ಲ. ಕೈಗಾರಿಕೀಕರಣ ಹಾಗೂ ನಗರೀಕರಣದಿಂದಾಗಿ ಅಪರಾಧಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆಧುನಿಕಸಂಚಾರ ಸೌಕರ್ಯ, ವಿದ್ಯುಚ್ಛಕ್ತಿ, ರೇಡಿಯೋ, ಚಲನಚಿತ್ರ, ವಿಮಾನ ಮುಂತಾದುವು ಹೊಸ ರೀತಿಯ ಅಪರಾಧಗಳಿಗೆ ಎಡೆಮಾಡಿಕೊಟ್ಟಿವೆ. ಅದರ ಬಗೆಗಳೂ ನಾನಾ ರೀತಿಯಾಗಿವೆ. ಕೈಗಾರಿಕೀಕರಣದಿಂದ ಉದ್ಭವಿಸಿದ ಅನೇಕ ಸಮಸ್ಯೆಗಳಲ್ಲಿ ಕೊಳಚೆ ಪ್ರದೇಶ ಬಹು ಮುಖ್ಯವಾದುದು. ಆ ಪ್ರದೇಶ ಎಲ್ಲ ಬಗೆಯ ಅಪರಾಧಗಳಿಗೂ ತವರುಮನೆಯಾಗಿದೆ ಎಂದರೆ ಉತ್ಪ್ರೇಕ್ಷೆಯಾಗಲಾರದು.
	
ಅಪರಾಧಕ್ಕೆ ಮೂಢನಂಬಿಕೆ, ಪದ್ಧತಿ, ಸಂಪ್ರದಾಯಗಳೂ ಕಾರಣವಾಗಿವೆ. ಸಾಧುಸಂತರ ಸೋಗಿನಲ್ಲಿ ಮೂಢಜನರಿಗೆ ಮಂಕುಹಿಡಿಸಿ, ಮನೆಯ ಮೂಲೆಯೊಂದರಲ್ಲಿ ಗುಪ್ತನಿಧಿ ಅಡಗಿದೆಯೆಂದು ನಂಬಿಸಿ, ಅದನ್ನು ಪಡೆಯಲು ವಿಶೇಷ ಪೂಜೆ ಪುನಸ್ಕಾರಗಳನ್ನು ಆಚರಿಸಲು ಬೆಲೆಬಾಳುವ ಒಡವೆಗಳನ್ನಿಡಿಸಿ, ಇಡೀ ರಾತ್ರಿ ಉಪವಾಸವಿರಿಸಿ, ಒಡವೆಗಳನ್ನು ಅಪಹರಿಸಿ ಹೇಳದೆ ಕೇಳದೆ ಓಡಿಹೋಗುವಂಥ ಪ್ರಸಂಗಗಳು ಸಾಮಾನ್ಯವಾಗುತ್ತಿವೆ. ಇಂಥ ಮೋಸಗಾರಿಕ ಕಾನೂನಿನ ದವಡೆಗೆ ಸಿಲುಕದಿದ್ದರೂ ಆತ್ಮಸಾಕ್ಷಿಯಾಗಿ ಪರಿಶೋಧಿಸಿದರೆ ಇವು ಘೋರ ಅಪರಾಧಗಳಾಗುತ್ತವೆ. ನ್ಯಾಯವಿತರಣೆಯ ಕ್ರಮಬಹಳ ನಿಧಾನವಾಗಿರುವುದು ಮತ್ತು ಹೆಚ್ಚು ಸಂಕೀರ್ಣವಾಗಿರುವುದು ಅಪರಾಧಕ್ಕೆ ಮತ್ತೊಂದು ಕಾರಣವಾಗಿದೆ.
	
ಅಪರಾಧದ ವರ್ಗೀಕರಣ: ಇಂಗ್ಲಿಷ್ ಕಾನೂನಿನ ಪ್ರಕಾರ ಅಪರಾಧವನ್ನು ರಾಜದ್ರೋಹ (ಟ್ರೀಸûನ್), ಘೋರಾಪರಾಧ (ಫೆಲನಿ), ದುರ್ನಡತೆ (ಮಿಸ್ ಡಿಮೀನರ್) ಎಂದು ವರ್ಗೀಕರಣ ಮಾಡಲಾಗಿದೆ.
	
ಒಬ್ಬನ ಸ್ವತ್ತು ಎಂದು ಕಾನೂನು ಒಪ್ಪಿರುವ ವಸ್ತುವನ್ನು ಇನ್ನೊಬ್ಬ ಆತನ ಒಪ್ಪಿಗೆಯಿಲ್ಲದೆ ತೆಗೆದುಕೊಂಡರೆ ಅಥವಾ ತೆಗೆದುಕೊಳ್ಳುವ ಉದ್ದೇಶದಿಂದ ಕದಲಿಸಿದರೆ ಅದು ಕಾನೂನಿನ ಪ್ರಕಾರ ಕಳ್ಳತನವೆಂಬ ಅಪರಾಧ, ಕೊಲೆ, ಸುಲಿಗೆ, ದರೋಡೆಗಳು ಇದೇ ಸಾಲಿನ ಘೋರಾಪರಾಧಗಳು. ವ್ಯಭಿಚಾರಕ್ಕೆ ಆರ್ಥಿಕ ಮುಗ್ಗಟ್ಟು, ಬಡತನ, ನಿರುದ್ಯೋಗ, ಸ್ವಾರ್ಥ, ದುಷ್ಟಸಹವಾಸ, ಸೊಗಸು ಮಾಡಬೇಕೆಂಬ ಲಾಲಸೆ, ತಂದೆ, ತಾಯಿ ಅಥವಾ ಮಲತಾಯಿ ಪೋಷಕರಿಂದ ಕಿರುಕುಳ, ಅವಿವಾಹಿತತೆ, ದೀರ್ಘಕಾಲದ ಏಕಾಂತತೆ ಮುಂತಾದುವು ಕಾರಣ. ಕುಡಿತದಂತೆ ವ್ಯಭಿಚಾರವೂ ಓಂದು ಅಪರಾಧ. ಆದರೆ ಕಾನೂನಿನಿಂದ ಇದನ್ನು ಪೂರ್ಣವಾಗಿ ತೊಡೆದುಹಾಕಲು ಸಾಧ್ಯವಾಗಿಲ್ಲ. ಪದಾರ್ಥಗಳ ಅಪಮಿಶ್ರಣ, ಅಫೀಮು ಸೇವನೆ, ಕುಡಿತ, ಪಲಾಯನವೃತ್ತಿ, ತಿರುಕುಳಿತನ ಈ ಮೊದಲಾದವುಗಳು ಬಿಡಿಸಲಾರದ ಸಾಮಾಜಿಕ ಸಮಸ್ಯೆಗಳಾಗಿವೆ.
	
ಸಾರ್ವಜನಿಕ ಸೇವೆಯಲ್ಲಿ ನಿರತನಾಗಿರುವ ವ್ಯಕ್ತಿ ತನಗಾಗಲಿ, ಇತರರಿಗಾಗಲಿ ನ್ಯಾಯವಾಗಿ ಸಲ್ಲಬೇಕಾದ ವೇತನದ ಜೊತೆಗೆ ಪ್ರತಿಫಲ ಪಡೆಯುವುದಕ್ಕಾಗಿ ಬೇರೆಯವರಿಗೆ ಒಂದು ಕೆಲಸಮಾಡಿಕೊಟ್ಟು ಪಕ್ಷಪಾತ ತೋರಿಸಿದರೆ ಅಂಥ ಅಪರಾಧದ ಹೆಸರು ಲಂಚಗುಳಿತನ, ಕಳ್ಳತನ, ಲಂಚಗುಳಿತನಗಳಿಗೆ ಬಡತನ ಒಂದು ಮುಖ್ಯ ಕಾರಣ. ಹಲವಾರು ಸಾಮಾಜಿಕ ಕಾರಣಗಳಿಂದ ಅರ್ಥಿಕ ಮುಗ್ಗಟ್ಟಿಗೆ ಸಿಕ್ಕಿ ತೊಂದರೆ ಅನುಭವಿಸುವ ಮನುಷ್ಯ ಇಂಥ ಕೃತ್ಯಗಳಿಗೆ ಕೈಹಾಕುತ್ತಾನೆ. ಇಲ್ಲೆಲ್ಲ ಸಮಾಜದ ಸರ್ವಾಂಗೀಣ ಸುಧಾರಣೆ ಬಹುಟ್ಟಿಗೆ ಅಪರಾಧವನ್ನು ಕಡಿಮೆ ಮಾಡಬಹುದು.
	
ಮೊಂಡು ಅಪರಾಧಿತನ: ಒಬ್ಬ ವ್ಯಕ್ತಿ ಸನ್ನಿವೇಶದ ಪ್ರಭಾವದಿಂದ ಅಥವಾ ಪದೇ ಪದೇ ಅಪರಾಧಕೃತ್ಯಗಳನ್ನು ಎಸಗಿ ಅಭ್ಯಾಸಬಲದಿಂದ ನಿತ್ಯಾಪರಾಧಿಯಾಗುತ್ತಾನೆ ಎಂದು ತಿಳಿದಿದೆ. ಇಂಥವರನ್ನು ಮೊಂಡು ಅಪರಾಧಿಗಳ ಗುಂಪಿಗೆ ಸೇರಿಸುತ್ತಾರೆ. ಸತ್ಯಾಂಶ ಏನೇ ಇರಲಿ ಪೋಲಿಸರಿಗೆ ಅಪರಾಧಿಯನ್ನು ಪತ್ತೆಹಚ್ಚಲು ಈ ತಿಳಿವಳಿಕೆ ಮೊದಲಮಾರ್ಗ. ಆದರೆ ಕಾನೂನು ರೀತ್ಯ ಇಂಥ ಒಬ್ಬ ಅವರಾಧಿಯನ್ನು ನಿಷ್ಕøಷ್ಟವಾಗಿ ಅಪರಾಧಿಯೆಂದು ಹೇಳಲು ಸಾಧ್ಯವಿಲ್ಲ. ಕೇವಲ ಕಾರ್ಯರೂಪದಿಂದ ಮಾತ್ರ ಆ ರೀತಿ ನಿರ್ಧರಿಸಬಹುದಾಗಿದೆ. ಯಾವ ವ್ಯಕ್ತಿ ಶೀಲಕ್ಕೆ ಬೆಲೆಕೊಡುವುದಿಲ್ಲವೋ ಮಾನಮರ್ಯಾದೆಗಳನ್ನು ಕಳೆದುಕೊಂಡಿರುವನೋ ಹೀನಕೃತ್ಯದಲ್ಲಿ ತೊಡಗಲು ಹೇಸಿಗೆಪಟ್ಟುಕೊಳ್ಳುವುದಿಲ್ಲವೋ ದುರ್ನಡತೆಯುಳ್ಳವನಾಗಿ ಹಿಂಜರಿಯದೆ ಪದೇಪದೇ ಅಪರಾಧಕೃತ್ಯಗಳನ್ನು ಮಾಡುವುದರ ಕಡೆಗೇ ಗಮನಕೊಡುವನೋ ಅಂಥ ವ್ಯಕ್ತಿಯನ್ನು ತಿದ್ದಲಾಗದ ಅಪರಾಧಿ ಎಂದು ಕರೆಯಬಹುದೆಂದು ಕೆಲವರ ಅಭಿಪ್ರಾಯ. ಆದರೆ ಅಂಥ ವ್ಯಕ್ತಿಗೆ ಶಿಕ್ಷೆಯ ಬದಲು ಮಾನಸಿಕ ಮತ್ತು ವೈದ್ಯಕೀಯ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ.
	
ಸಮಾಜವಿದ್ದಲ್ಲಿ ಕಾಯಿದೆ ಕಾನೂನುಗಳಿವೆ; ಇವಿದ್ದಲ್ಲಿ ಉಲ್ಲಂಘನೆಯೂ ಇದೆ. ಹೀಗೆ ನಮಗೆ ಬೇಕಾಗಲಿ, ಬೇಡಾಗಲಿ, ಅಪರಾಧ ಸಾಮಾಜಿಕ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಪ್ರಗತಿಪರ ಸಮಾಜದಲ್ಲಿ ಅಪರಾಧದ ಪ್ರಮಾಣ ಮತ್ತು ತೀವ್ರತೆ ಕಡಿಮೆ. ಆದ್ದರಿಂದ ಸಮಾಜಕ್ಕೆ ದೊರೆಯುವ ಯೋಗ್ಯ ಚಿಕಿತ್ಸೆಯ ಪರಿಣಾಮ ಅಪರಾಧದ ಇಳಿವರಿ.		
(ಎನ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ